ಭಾನುವಾರ, ಏಪ್ರಿಲ್ 5, 2020

ಕರೋನ ದಿನಗಳು ..

ಎಂಬತ್ತರ ದಶಕದಲ್ಲಿ ಹುಟ್ಟಿದವನು ನಾನು, ನನ್ನ ಬಾಲ್ಯದ ದಿನಗಳಲ್ಲಿ ಪ್ರತಿಯೊಂದು ಹೊಸ ಆವಿಷ್ಕಾರಗಳನ್ನು ,ಬದಲಾವಣೆಗಳನ್ನು ಕಂಡಾಗ ಅತೀವ ಸಂತಸ ಪಡುತ್ತಿದ್ದೆ. ನನಗೆ ತುಂಬಾ ಪರಿಣಾಮಕಾರಿಗಳೆನಿಸಿದ್ದು, ದೂರಸಂಪರ್ಕ ಮತ್ತು ಹೆದ್ದಾರಿಗಳು . ಇಂದು ಉಪಯೋಗಿಸುವ ಆಧುನಿಕ ಇಲೆಕ್ಟ್ರಾನಿಕ್ ಉಪಕರಣಗಳ ಕಲ್ಪನೆಯನ್ನು ನಾನು ನಮ್ಮ ಅಂಗಡಿಯ ಮುಂದೆ ಕಾಣುತ್ತಿದ್ದೆ . ಇಂದಿಗೂ ಕಾರ್ಯನಿರತವಾಗಿರೋ ಹ್ಯಾಮ್ ರೇಡಿಯೋ ಬಗ್ಗೆ ಲೇಖನವೊಂದು ೯೪ ರಲ್ಲಿ ಪ್ರಕಟವಾಗಿತ್ತು ಅದಕ್ಕೆ ಪ್ರವೇಶ ಪಡೆವಯಲು ೫೦೦ ರೂಪಾಯಿ ಶುಲ್ಕವಿತ್ತು ಅಪ್ಪನ ಹತ್ತಿರ ಹಣವಿಲ್ಲದ್ದಕ್ಕೆ ಬೇಸರವಾಗಿ ಅಂದಿನ ಪ್ರಧಾನಿ ಶ್ರೀ ಪಿ ವಿ ನರಸಿಂಹರಾಯರಿಗೆ ಪತ್ರ ಬರೆದಿದ್ದೆ , ಆದರೆ ದುರದೃಷ್ಟವಶಾತ್ ವಿಳಾಸ ತಪ್ಪಾಗಿತ್ತು .
                           
                  ಸುಮಾರು ೧೯೯೨ರ ಸಮಯ ಬೆಂಗಳೂರಿನಲ್ಲಿ ಅತ್ತೆಯ ಮನೆ ಗೃಹ ಪ್ರವೇಶ , ಅಪ್ಪ ಹಾವೇರಿಯಲ್ಲಿ ಇದ್ದರು , ಅಮ್ಮ ದೊಡ್ಡಮ್ಮ ದೊಡ್ಡಪ್ಪ ಜೊತೆ ಹೋಗಲು ನಿರ್ಧರಿಸಿದ್ದರು,ಬಡತನದಲ್ಲಿ ಕಾಲ ಕಳೆಯುತ್ತಿದ್ದ ಸಮಯವದು , ಏನೂ ತೋಚದೆ ಅಮ್ಮ ಅಕ್ಕ ಪಕ್ಕದಲ್ಲಿ ಕೈ   ಸಾಲ ಮಾಡಿ ಹೊರಟಿದ್ದರು . ಬೆಂಗಳೂರು ಎಂಬ ಶಬ್ದ ಕೇಳಿದೊಡನೆಯೇ ಮೈ ರೋಮಾಂಚನ ಆಗಿತ್ತು , ಅಮ್ಮನಿಗೆ ಕಾಡಿ ಬೇಡಿ ಮತ್ತೆ ಸಾಲ ಮಾಡಿಸಿದ್ದೆ ,ರಾಣಿಬೆನ್ನೂರಿನಿಂದ ಬೆಂಗಳೂರಿಗೆ ಆಗ ೫೦ ರೂಪಾಯಿ ಬಸ್ ದರ , ನನಗೆ ಅರ್ಧ ದರ ೨೫ ರೂಪಾಯಿ , ಆಗ ರೈಲುಗಳಲ್ಲಿ ಬೆಂಗಳೂರಿಗೆ ಹೋಗವು ಅಭ್ಯಾಸ ನಮ್ಮೂರಲ್ಲಿ ಸಾಕಷ್ಟು ಜನರಲ್ಲಿ ಇರಲಿಲ್ಲ , ಬಸ್ ಮತ್ತೆ ಒಬ್ಬರೇ ಓಡಾಡಿದರೆ ಲಾರಿಗಳ ಅವಲಂಬನೆ ಜಾಸ್ತಿ ಇತ್ತು . ಲಾರಿಗಳ ಅಪಘಾತ ತುಂಬಾ ಆಗುತ್ತಿದ್ದರಿಂದ ಅದನ್ನು ಕೈಲಾಸ್ ಗಾಡಿ ಎಂದು ನಾಮಕರಣ ಮಾಡಿದ್ದರು ,ಆದರೂ ಜನ ಚಾಲಕನಿಗೆ ಪುಡಿಗಾಸು ಕೊಟ್ಟು ಅದರಲ್ಲೇ ಪ್ರಯಾಣಿಸುತ್ತಿದ್ದರು .
                ರಾಣಿಬೆನ್ನೂರು ಬೆಂಗಳೂರು ಮತ್ತು ಪುಣೆ ಹೆದ್ದಾರಿಯಲ್ಲಿ ಬರುವ ನಗರ , ೯೦ರ ದಶಕದಲ್ಲಿ ರಾಷ್ಟೀಯ ಹೆದ್ದಾರಿ ಚಿಕ್ಕದಾಗಿದ್ದ ಕಾಲ , ನಗರದೊಳಗೆ ಹೆದ್ದಾರಿ ಹಾದು ಹೋಗುತ್ತಿದ್ದರಿಂದ ಅಪಘಾತಗಳು ಆತ್ಮಹತ್ಯಗಳ ವರದಿಗಳು ಪ್ರತಿದಿನ ಮಾಮೂಲು ಎಂಬಂತೆ ಆಗಿದ್ದವು . ಆಗ ಪ್ರತಿ ವರದಿಗಳನ್ನೂ ಓದಿದಾದಾಗ ಯಾಕೆ ಈ ರಸ್ತೆಗಳು ಸುಧಾರಿಸುತ್ತಿಲ್ಲ ಹೆದ್ದಾರಿಗಳು ಉತ್ತಮವಾದರೆ ಆರ್ಥಿಕ ಅಭಿರುದ್ಧಿಯು ಆಗುತ್ತದೆಯೇ ಎಂದು ಅಪ್ಪನಿಗೆ ಕೇಳುತ್ತಿದ್ದೆ .